ಈಜಿಪ್ಟ್-
ಸಂಯುಕ್ತ ಅರಬ್ ಗಣರಾಜ್ಯವೆಂದು ಅಧಿಕೃತ ಹೆಸರು (ಯುನೈಟೆಡ್ ಅರಬ್ ರಿಪಬ್ಲಿಕ್). ಆಫ್ರಿಕದ ಈಶಾನ್ಯ ಮೂಲೆಯನ್ನೂ ನೈಋತ್ಯ ಏಷ್ಯದಲ್ಲಿರುವ ಸಿನಾಯ್ ಪರ್ಯಾಯದ್ವೀಪವನ್ನೂ ಒಳಗೊಂಡ ಪ್ರದೇಶ.

	ಆಫ್ರಿಕದ ಸುಮಾರು ಮೂವತ್ತನೆಯ ಒಂದು ಭಾಗದಷ್ಟಿರುವ ಈ ದೇಶದ ವಿಸ್ತೀರ್ಣ 10,02,000 ಚ. ಕಿ. ಮೀ. ಸ್ಥೂಲವಾಗಿ ಇದು ಚಚ್ಚೌಕಾಕಾರ. ಉತ್ತರ ಅಕ್ಷಾಂಶ 220 ಯಿಂದ 320ಯ ವರೆಗೂ ಪೂರ್ವರೇಖಾಂಶ 250 ಯಿಂದ 360 ಯ ವರೆಗೂ ಇರುವ ಈ ದೇಶದ ದಕ್ಷಿಣೋತ್ತರ ಪರಮಾವಧಿ ದೂರ 1070 ಕಿ.ಮೀ; ಪೂರ್ವ-ಪಶ್ಚಿಮ 1225 ಕಿ.ಮೀ. ಇಸ್ರೇಲ್, ಸೂಡಾನ್, ಲಿಬಿಯ, ಮೆಡಿಟರೇನಿಯನ್ ಸಮುದ್ರ, ಕೆಂಪು ಸಮುದ್ರ, ಇವು ಮೇರೆಗಳು.

	ಈಜಿಪ್ಟಿನ ಮುಖ್ಯಭಾಗಗಳೆಂದರೆ ನೈಲ್ ನದಿಯ ಕೆಳಭಾಗ ಮತ್ತು ಅದರ ಮುಖಜಭೂಮಿ. ಮೇಲಣ ಈಜಿಪ್ಟ್, ಕೆಳಗಣ ಈಜಿಪ್ಟುಗಳೆಂದರೆ ಇವೇ. ನೈಲ್ ನದೀ ಕಣವೆಯ ಹೊರಗೆ ಇರುವ ಪ್ರದೇಶಗಳೆಂದರೆ ಪಶ್ಚಿಮ ದಕ್ಷಿಣ ಮರುಭೂಮಿಗಳು, ಸಿನಾಯ್ ಮತ್ತು ಕೆಂಪು ಸಮುದ್ರದ ಜಿಲ್ಲಾಪಾಂತ್ಯಗಳು. ಸೂಯೆಜ್ ಖಾರಿಯಲ್ಲೂ ಕೆಂಪು ಸಮುದ್ರದಲ್ಲೂ ಇರುವ ಕೆಲವು ಸಣ್ಣಪುಟ್ಟ ಬಂಜರು ದ್ವೀಪಗಳು ಈಜಿಪ್ಟಿಗೆ ಸೇರಿವೆ. ಇವುಗಳ ಪೈಕಿ ಜಂಬಲ್, ಷಡ್ವಾನ್, ಗೇಫಾಟಿನ್ ಮತ್ತು ಜೆಬರ್‍ಗೆಡ್ ಮುಖ್ಯ. 1949ರಲ್ಲಿ ಇಸ್ರೇಲಿನೊಂದಿಗೆ ಮಾಡಿಕೊಂಡ ಯುದ್ಧವಿರಾಮ ಒಪ್ಪಂದದ ಪ್ರಕಾರ ಪ್ಯಾಲಿಸ್ಟೈನಿನ ನೈಋತ್ಯಕ್ಕಿರುವ ಗಾಜಾ ಎಂಬ ಕರಾವಳಿಪ್ರದೇಶದ ತುಂಡೊಂದು ಈಜಿಪ್ಟಿಗೆ ಸೇರಿತ್ತು. 1967ರ ಅರಬ್-ಇಸ್ರೇಲ್ ಯುದ್ಧದಲ್ಲಿ ಇಸ್ರೇಲು ಈ ತುಂಡನ್ನೂ ಸಿನಾಯ್ ಪರ್ಯಾಯದ್ವೀಪವನ್ನೂ ಆಕ್ರಮಿಸಿಕೊಂಡಿತು.

	ಮೇಲ್ಮೈಲಕ್ಷಣ: ನೈಲ್‍ನದೀ ಕಣಿವೆ ಮತ್ತು ಮುಖಜಭೂಮಿ, ಪಶ್ಚಿಮದ ಮರುಭೂಮಿ, ಪೂರ್ವದ ಮರುಭೂಮಿ ಮತ್ತು ಸಿನಾಯ್ ಪರ್ಯಾಯದ್ವೀಪಗಳೆಂದು ಈಜಿಪ್ಟನ್ನು ನಾಲ್ಕು ಸ್ವಾಭಾವಿಕ ಪ್ರದೇಶಗಳಾಗಿ ವಿಂಗಡಿಸಬಹುದು. ಈಜಿಪ್ಟಿನಲ್ಲಿ ಹರಿಯುವ ನದಿಯೆಂದರೆ ನೈಲ್ ಒಂದೇ. ಗಾಡಿ ಹಾಲ್ಫದ ಉತ್ತರದಲ್ಲಿ ಈಜಿಪ್ಟನ್ನು ಹೊಕ್ಕು, ಬೆಣಚುಕಲ್ಲು-ಮರಳುಗಲ್ಲು ಬಂಡೆಗಳ ನಡುವೆ ನುಸುಳಿ, ಆಸ್ವಾನ್‍ಗೆ 8 ಕಿ.ಮೀ. ದೂರದಲ್ಲಿ ದುಮುಕಿ, ಮುಂದೆ ಕ್ರಮೇಣ ವಿಸ್ತಾರವಾಗುವ ಕಣಿವೆಯಲ್ಲಿ ಈ ನದಿ ಹರಿಯುತ್ತದೆ. ಈ ಕಣಿವೆಯ ಸರಾಸರಿ ಅಗಲ 10 ಕಿ.ಮೀ. ಕೈರೋವಿನ ಈಶಾನ್ಯಕ್ಕೆ 20 ಕಿ.ಮೀ. ದೂರದಲ್ಲಿ ಈ ನದಿ ಎರಡಾಗಿ ಕವಲೊಡೆಯುತ್ತದೆ. ಮುಖಜಭೂಮಿಯಲ್ಲಿ ಅಂಕುಡೊಂಕಾಗಿ ಪ್ರವಹಿಸಿ ರಾಸೆಟ್ಟ ಮತ್ತು ಡಾಮಿಯೆಟ್ಟಗಳಲ್ಲಿ ಸಮುದ್ರದಲ್ಲಿ ಈ ಕವಲುಗಳು ಐಕ್ಯವಾಗುತ್ತವೆ. ಈ ಮುಖಜಭೂಮಿಯ ಉತ್ತರದಲ್ಲಿ ಕಿರಿ ಆಳದ ಅನೇಕ ಸರೋವರಗಳಿವೆ. ನೆಲ ಜವುಗು : ಬಂಜರು. ಉಪ್ಪು, ಮಿಶ್ರಿತ. ಈಜಿಪ್ಟಿನ ದಕ್ಷಿಣೋತ್ತರವಾಗಿ ಹರಿಯುವ ನೈಲ್‍ನದಿಗೆ ಈ ದೇಶದಲ್ಲಿ ಒಂದಾದರೂ ಉಪನದಿಯಿಲ್ಲ. ನೈಲ್‍ನದಿಯ ಪ್ರವಾಹದಲ್ಲಿ ತೀವ್ರ ಏರಿಳಿತಗಳಿರುತ್ತವೆ.

	ಈಜಿಪ್ಟಿನ ಪಶ್ಚಿಮ ಮರುಭೂಮಿಯಲ್ಲಿ ಬಂಡೆ  ತುಂಬಿದ ದಿಣ್ಣೆ ನೆಲಗಳೂ ಕಲ್ಲು ಮರಳು ಬಯಲುಗಳೂ ಸಾಮಾನ್ಯ. ಸಮಾನಾಂತರವಾಗಿ ದಕ್ಷಿಣೋತ್ತರವಾಗಿ ಹಬ್ಬಿದ ಮರಳು ರಾಶಿಗಳ ರೇಖೆಗಳೂ ಅಲ್ಲಲ್ಲಿ ಉಂಟು. ಇಲ್ಲಿ ನೀರಿನ ವಸತಿ ಅಪರೂಪವಾದ್ದರಿಂದ ಒಟ್ಟಿನಲ್ಲಿ ಇದು ಮನುಷ್ಯ ಸಂಚಾರಕ್ಕೂ ವಾಸಕ್ಕೂ ಅಪ್ರಯೋಜಕ. ಆದರೆ ಓಯೆಸಿಸ್ಸುಗಳಿರುವಲ್ಲಿ ವಸತಿ ಸಾಧ್ಯ. ಇವುಗಳ ಪೈಕಿ ಕಟ್ಟಾರ ಎಂಬುದು ಅತ್ಯಂತ  ದೊಡದ್ದು. ಉಳಿದವು ಸಿವ, ಬಹಾರಿಯ, ಫರಾಫ್ರ, ದಖ್ಲ ಮತ್ತು ಖರ್ಗ.

	ಪೂರ್ವದಲ್ಲಿರುವ ಅರೇಬಿಯನ್ ಮರುಭೂಮಿ 7,000' ಎತ್ತರ. ಇದರ ಉತ್ತರಕ್ಕೂ  ಪಶ್ಚಿಮಕ್ಕೂ ತಗ್ಗುದಿನ್ನೆಯಿದೆ. ವಿರಳವಾಗಿ ಹಬ್ಬಿರುವ ಬಾವಿಗಳಿಂದಲೂ ಊಟೆಗಳಿಂದಲೂ ಅಲ್ಪಸ್ವಲ್ಪ ಜಲ ಲಭಿಸುತ್ತದೆ.

	ಉತ್ತರದ ಸೈಕತ ತೀರಪ್ರದೇಶಕ್ಕಿಂತ ಸಿನಾಯ್ ಪರ್ಯಾಯದ್ವೀಪ ಭಿನ್ನವಾದದ್ದು. ಇದರ ನಡುವಿನಲ್ಲಿ  ಸುಣ್ಣಕಲ್ಲಿನ ಎತ್ತರ ನೆಲವೂ ದಕ್ಷಿಣದಲ್ಲಿ ಗ್ರಾನೈಟ್ ಪರ್ವತವೂ ಇದರ ನಡುನಡುವೆ ಕಮ್ಮರಿ, ಒಣಕಲು ತೊರೆಗಳೂ ಇವೆ.

	ವಾಯುಗುಣ: ಇಲ್ಲಿನದು ಮರುಭೂಮಿಯ ವಾಯುಗುಣ. ಹಗಲು ಉಷ್ಣಾಂಶ 1100-1200ಫ್ಯಾ. ಆದರೆ ರಾತ್ರಿ ಉಷ್ಣಾಂಶ ಬಹಳ ಕಡಿಮೆ. ಶೀತೋಷ್ಣ ವಿಪರೀತ. ಮೆಡಿಟರೇನಿಯನ್ ತೀರಪ್ರದೇಶದಲ್ಲಿ ಹವಾ ಹಿತಕರ. ಮಳೆ ಬಹಳ ಕಡಿಮೆ, ವರ್ಷಕ್ಕೆ ಸರಾಸರಿ 5'-10. ಆದರೆ ಕೆಲವು ವೇಳೆ ಭಾರಿ ಮಳೆಯಾಗುವುದುಂಟು. ಇಲ್ಲಿ ಸ್ವಾಭಾವಿಕ ಸಸ್ಯವರ್ಗಗಳು ಬಹಳ ಕಡಿಮೆ. ಓಯಿಸಿಸ್ಸುಗಳ ಸಮೀಪದಲ್ಲಿ ಖರ್ಜೂರ ಮತ್ತು ಕೆಲವು ಸಣ್ಣಪುಟ್ಟ ಗಿಡ ಬೆಳೆಯುತ್ತಾರೆ. ಒಂಟೆ, ಕತ್ತೆ, ಕುರಿ, ಮೇಕೆ, ಕೆಲವು ಜಾತಿಯ ಪಕ್ಷಿ-ಇವು ಇಲ್ಲಿನ ಪ್ರಾಣಿಸಂಕುಲ.

	ಈ ದೇಶದಲ್ಲಿ ವ್ಯವಸಾಯವೇ ಜನರ ಮುಖ್ಯ ಕಸಬು. ಆದರೆ ಇದಕ್ಕೆ ಯೋಗ್ಯವಾದ ಭೂಮಿ ಬಲು ಸ್ವಲ್ಪ. ನೈಲ್ ನದಿ ಬಯಲು ಬಿಟ್ಟರೆ ಇನ್ನಾವ ಉಪಯುಕ್ತ ಭೂಮಿಯೂ ಇಲ್ಲ. ನೈಲ್ ಇಲ್ಲದಿದ್ದರೆ ಇಡೀ ದೇಶವೇ ಮರಳುಗಾಡಾಗುತ್ತಿತ್ತು. ಈ ನದಿಯ ಬಯಲು ಪ್ರದೇಶ ಒಟ್ಟು ವಿಸ್ತೀರ್ಣದಲ್ಲಿ 9%ರಷ್ಟು ಮಾತ್ರ. ವ್ಯವಸಾಯೋಪಯುಕ್ತ ಭೂಮಿಯ ಬೆಲೆ ಬಹಳ ಹೆಚ್ಚು. ನೈಲ್ ನದಿಯ ನೀರಾವರಿ ವ್ಯವಸ್ಥೆಯೇ ಜನಜೀವನ ಧಮನಿ. ಇಲ್ಲಿ ಸುಮಾರು 24,000 ಕಿ.ಮೀ. ಕಾಲುವೆಗಳಿವೆ. ಆಸ್ವಾನ್ ಪಟ್ಟಣದ ಬಳಿ ನೈಲ್‍ನದಿಗೆ ಅಡ್ಡಲಾಗಿ ಕಟ್ಟಿರುವ ಆಸ್ವಾನ್ ಕಟ್ಟೆ ಮತ್ತು ಆಸ್ವಾನ್ ಎತ್ತರ ಕಟ್ಟೆ. ಹಿಂದೆ ಈಜಿಪ್ಟ್ ವ್ಯವಸಾಯದಲ್ಲಿ ಹಿಂದುಳಿದಿತ್ತು. ಆದರೆ ಇತ್ತೀಚೆಗೆ ಕೃಷಿ ವಿಧಾನದಲ್ಲಿ ಕ್ರಾಂತಿಯುಂಟಾಗಿದೆ. ಆಧುನಿಕ ಉಪಕರಣಗಳೂ ಬಳಕೆಗೆ ಬರುತ್ತಿವೆ.

	ಜನ, ಜೀವನ: 1966ರ ಜನಗಣತಿಯ ಪ್ರಕಾರ ಜನಸಂಖ್ಯೆ 3,00,75,858. ಇವರ ಪೈಕಿ 99% ಜನ ನೈಲ್ ಕಣಿವೆಯಲ್ಲಿ ವಾಸಿಸುತ್ತಾರೆ. ಈ ಪ್ರದೇಶದಲ್ಲಿ ಸರಾಸರಿ ಜನಸಾಂದ್ರತೆ ಚದರಮೈಲಿಗೆ 1,400. ನದಿ ಮುಖಜಭೂಮಿಯ ಬಳಿಯಲ್ಲೂ ಗಿರ್ಗ ಪ್ರಾಂತ್ಯದಲ್ಲೂ ಸಾಂದ್ರತೆ ಹೆಚ್ಚು; ಆದರೆ ಮುಖಜಭೂಮಿಯ ಪೂರ್ವೋತ್ತರ ಜವುಗು ನೆಲಗಳಲ್ಲಿ ಕಡಿಮೆ. ನೈಲ್ ನದೀ ಕಣಿವೆಯಾಚೆಗಿನ ಪ್ರದೇಶದಲ್ಲಿ ಸರಾಸರಿಯಲ್ಲಿ ಮೂರು ಚದರ ಮೈಲಿಗೆ ಒಬ್ಬ ಮನುಷ್ಯ.

	ಈಜಿಪ್ಟಿನ ಜನಸಾಮಾನ್ಯರಲ್ಲಿ ಮೂರು ವರ್ಗಗಳುಂಟು: ನೈಲ್ ಕಣಿವೆಯ ರೈತರು (ಫೆಲ್ಲಾ) ಮತ್ತು ಪಟ್ಟಣಿಗರು; ಮರಳುಗಾಡಿನ ಗ್ರಾಮಕರು; ನೈಲ್ ನದಿಯ ಮೊದಲನೆಯ ಜಲಪಾತದ ದಕ್ಷಿಣದಲ್ಲಿ ವಾಸಿಸುವ ನುಬಿಯನ್ನರು ಅಥವಾ ಬರ್ಬರಿನ್ನರು. ಆಧುನಿಕ ಈಜಿಪ್ಟಿಯನ್ನರದು ಐಗುಪ್ತ ಕುಲ; ಎತ್ತರ  5' 6.

	ಅನೇಕ ಸಹಸ್ರಮಾನಗಳಿಂದಲೂ ನೈಲ್‍ನದಿಯ ದೃಢಾಂಗ ರೈತನಿಗೂ ಮರುಭೂಮಿಯ ತೆಳುದೇಹಿಗೂ ನಡುವಣ ವ್ಯತ್ಯಾಸ ಖಚಿತವಾಗಿ ಉಳಿದುಕೊಂಡು ಬಂದಿದೆ.

	ನೂರಕ್ಕೆ ತೊಂಬತ್ತರಷ್ಟು ಮಂದಿ ಮುಸ್ಲಿಮರು. ಇವರಲ್ಲಿ ಬಹುತೇಕ ಎಲ್ಲರದೂ ಸುನ್ನಿ ಪಂಗಡ. ಇಸ್ಲಾಂ ಧರ್ಮ ಬರುವ ಮೊದಲಿದ್ದ ಹಳೆಗಾಲದ ಸಂಪ್ರದಾಯಾನುಯಾಯಿಗಳು ಈಗ ವಿರಳವಾಗಿದ್ದಾರೆ. ಕ್ರಿ. ಶ. 4ನೆಯ ಶತಮಾನದಲ್ಲಿ ಹಳ್ಳಿಗಳಲ್ಲಿ ಕ್ರೈಸ್ತಧರ್ಮ ಅಪ್ಪಿ, ತಮ್ಮವೇ ಆದ ಚರ್ಚ್, ಪಂಚಾಂಗ ಮತ್ತು ಭಾಷೆಗಳನ್ನುಳ್ಳ ಕಾಪ್ಪಿಕ್ ಧರ್ಮೀಯರೂ ರೋಮನ್ ಕೆಥೊಲಿಕ್, ಪ್ರಾಟೆಸ್ಟಂಟ್ ಮುಂತಾದ ಕ್ರೈಸ್ತರೂ ಇಲ್ಲುಂಟು.

	ಕೈರೋ (ರಾಜಧಾನಿ), ಅಲೆಗ್ಸಾಂಡ್ರಿಯ, ಪೋರ್ಟ್‍ಸೆಡ್, ಟಾಂಟ, ಮೆಹಲ್ಲ ಎಲ್ ಕುಬ್ರ, ಸೂಯೆಜ್ó ಮನ್ಸುರ ಇವು ಮುಖ್ಯ ಪಟ್ಟಣಗಳು.

	ಈಜಿಪ್ಷಿಯನ್ ಪೌಂಡು ಇಲ್ಲಿನ ನಾಣ್ಯ. 100 ಪೈಸ್ಟ್ರೆ=1 ಈ ಪೌಂ. 10ಮಿಲ್ಲೈ ಮೆ=1 ಪೈಸ್ಟ್ರೆ. 1,5,10 ಮಿಲ್ಲೈಮೆ ಹಾಗೂ 2,5, 10, 20 ಪೈಸ್ಟ್ರೆ ನಾಣ್ಯಗಳೂ 5, 10, ಪೈಸ್ಟ್ರೆ ಮತ್ತು 1/4, 1/2, 1, 5, 10 ಈ. ಪೌಂ. ನೋಟುಗಳೂ ಚಲಾವಣೆಯಲ್ಲಿವೆ. ಅಧಿಕೃತ ವಿನಿಮಯ ದರ: 1.04 ಈ. ಪೌಂ.=1 ಪೌಂ. ಸ್ಪರ್ಲಿಂಗ್: 0.435 ಈ. ಪೌಂ.=1 ಅಮೆರಿಕ ಸಂ. ಸಂ. ಡಾಲರ್.	
(ಎಸ್.ಎನ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ